ಬಿರ್ಕ್‍ಲೆಂಡ್, ಕ್ರಿಸ್ಟಿಯನ್
1867-1917.  ಕಾಂತತೆ ಮತ್ತು ವಿದ್ಯುತ್ತ್ ಕುರಿತು ಸಂಶೋಧನೆ ನಡೆಸಿದ ನಾರ್ವೆಯ ಭೌತವಿಜ್ಞಾನಿ.  ಓಸ್ಲೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇರಿದ.  ಆಕ್ರ್ಟಿಟ್ ಪ್ರದೇಶದಲ್ಲಿ ಕಾಂತೀಯ ವೀಕ್ಷಣಾಲಯಗಳ (ಮ್ಯಾಗ್ನೆಟಿಕ್ ಅಬ್ಸರ್ವೇಟರೀಸ್) ಸ್ಥಾಪನೆಗೆ ಸಹಾಯ ಮಾಡಿದ.  ನಾರ್ವೆಯ ಎಂಜಿನಿಯರನಾದ ಸ್ಯಾಮ್ಯುಯೆಲ್ ಏಯ್ಡ್ (1866-1940) ಜೊತೆ ಕೆಲಸಮಾಡಿ ನೈಟ್ರೊಜನ್ ಸ್ಥಿರೀಕರಣಕ್ಕಾಗಿ ವಿದ್ಯುತ್ ಚಾಪ ಪ್ರಕ್ರಿಯೆಯನ್ನು  (ಎಲೆಕ್ಟ್ರಿಕ್ ಆರ್ಕ್ ಪ್ರೋಸೆಸ್) ಅಭಿವರ್ಧಿಸಿದ.  ಭೂಕಾಂತತೆಗೆ ಬಾಹ್ಯ ಆಕರಗಳೂ ಆಂಶಿಕವಾಗಿ ಕಾರಣೀಭೂತವಾಗಿದ್ದು ಉನ್ನತ ವಾತಾವರಣದ ವಿದ್ಯುತ್ ಪ್ರವಾಹಗಳು ಅಯಾನನ್‍ಗೋಲಕ್ಕಿಂತ ಭಿನ್ನವಲ್ಲವೆಂದು ವಿವರಿಸಿದ.  ಉತ್ತರಧ್ರುವಪ್ರಭೆ (ಅರೋರ ಬೋರಿಯಾಲಿಸ್) ಎಂಬುದು ವಿದ್ಯುತ್ಕಾಂತೀಯ ವಿದ್ಯಮಾನ ಎಂದು ಸ್ಪಷ್ಟೀಕರಿಸಿದ.  ಧ್ರುವ ಪ್ರದೇಶದ ಮೇಲಿನ ವಾತಾವರಣದ ಉನ್ನತ ಸ್ತರಗಳನ್ನು ವಿದ್ಯುದಾವಿಷ್ಟ ಕಣಗಳು ಸಂಘಟ್ಟಿಸಿದಾಗ ಧ್ರುವಪ್ರಭೆಗಳೂ ಕಾಂತೀಯ ಬಿರುಗಾಳಿಗಳೂ (ಮ್ಯಾಗ್ನೆಟಿಕ್ ಸ್ಟಾಮ್ರ್ಸ್) ಉಂಟಾಗುವುವೆಂದು ವಿವರಿಸಿದ.

ಕ್ರಾಂತಿ ವೃತ್ತದಲ್ಲಿ ಒಮ್ಮೊಮ್ಮೆ ಕಾಣಿಸುವ ಮಂದ ಬೆಳಕಿನ ಪಟ್ಟೆಗೆ ರಾಶಿ ಪ್ರಕಾಶ (eóÉೂೀಡಿಯಾಕಲ್ ಲೈಟ್) ಎಂಬ ಹೆಸರಿದೆ.  ಸೌರವ್ಯೂಹದಲ್ಲಿರುವ ಧೂಳಿನ ಕ್ಷಣಗಳಿಂದ ಸೂರ್ಯ ಪ್ರಕಾಶ ಪ್ರತಿಫಲಿಸಲ್ಪಟ್ಟು ಅಥವಾ ವಿವರ್ತಿಸಲ್ಪಟ್ಟು ಉಂಟಾಗುವ ಈ ವಿದ್ಯಮಾನ ಬಿರ್ಕ್‍ಲೆಂಡನ ಆಸಕ್ತಿಯನ್ನು ಕೆರಳಿಸಿತು.  ಅದರ ವಿಶ್ಲೇಷಣೆಗಾಗಿ ಇವನು ತನ್ನ ಜೀವಿತದ ಕೊನೆಯ ವರ್ಷಗಳಲ್ಲಿ ಕೊನೆಯ ವರ್ಷಗಳಲ್ಲಿ ನೇಟಾಲ್, ಈಜಿಪ್ಟ್ ಮತ್ತು ಜಪಾನ್ ದೇಶಗಳನ್ನು ಸಂದರ್ಶಿಸಿದ.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ